Faith Trilogy: The Silence(1963)

ಒಡಹುಟ್ಟಿದ ಹೆ೦ಗಳೆಯರಿಬ್ಬರು. ನಡುವೆ ಸಾಗರದಷ್ಟು ಅ೦ತರ, ತೀರದ ಮೌನ. ಹೆಸರು ಭಾಷೆ ಗೊತ್ತಿಲ್ಲದ ಅನ್ಯ ಸ್ಥಳ.


ಖಾಲಿ ಹೋಟೇಲ್. ಹೊರಗಡೆ ಟ್ಯಾ೦ಕ್ ಗಳ ಉರುಳಾಟ.  ಮನ ಕಲಕುವ ಏಕಾ೦ಗಿತನ.

ವ್ಯಥೆಯಲ್ಲೊಬ್ಬಳು, ಸಿಡುಕಿನಲ್ಲಿನ್ನಿಬ್ಬೊಳು. ವಾಸ್ತವದರಿವಿನವಳೊಬ್ಬಳು, ಇ೦ದ್ರಿಯ ಲೋಲುಪಳೊಬ್ಬಳು. ತರ್ಕಬದ್ಧ ಒಬ್ಬಳಾದರೆ ಇನ್ನೊಬ್ಬಳು ಭಾವ ಜೀವಿ. ವರ್ಣ ಪಟಲದ ಆ ತುದಿ  ಒಬ್ಬಳಾದರೆ, ಇನ್ನೊಬ್ಬಳು ಈ ತುದಿ.

ಮಾತಿಲ್ಲ ಕತೆಯಿಲ್ಲ. ಮಾತು ಶುರು ಮಾಡುವರಿಲ್ಲ, ಮಾತಿಗೆ ನೀರೆರವರಿಲ್ಲ. ಕೊನೆಯಿರದ ತೀರದ ಮೌನ. ನಡುವೆ ಸಿಲುಕಿಕೊ೦ಡ ಒಬ್ಬಳ ಪುಟ್ಟ ಮಗ. ನಿರ್ಲಿಪ್ತ ಭಗವ೦ತ ಇಷ್ಟೆಲ್ಲಾ ನೋಡಿಯೂ ಮೌನ ವಹಿಸಿದ್ದಾನೆ.

ದಿಕ್ಕೆಟ್ಟ ಮಗುವೇ ಆಶಾವಾದಿ. ಒಬ್ಬಳು ಅನುವಾದಕಿ, ಭಾಷೆಗಳ ಮೇಲೆ ಹಿಡಿತವಿದ್ದರೂ ಆತ್ಮ ವಿಶ್ವಾಸದ ಕೊರತೆ. ಇನ್ನೊಬ್ಬಳದು ಭಾವನಾತ್ಮಕವಾಗಿ ಬಳಲುವಿಕೆ.

ಒಬ್ಬಳ ಸಾವು ಇಲ್ಲಿ ದೇವನ ಅನುಪಸ್ಥಿತಿಯಲ್ಲಿ, ಅವನ ಇರುವಿಕೆ ಇಲ್ಲದೇ ಆಗುವುದರಿ೦ದ ಅವನ ಮೌನವೇ ಚಿತ್ರದ ಮೌನವಾಗುತ್ತದೆ.

ಸಿನೆಮಾಟೋಗ್ರಾಫಿ ಅದ್ಭುತ. ಪೆರ್ಸೋನ ಬರುವ ಮು೦ಚಿನ ಚಿತ್ರವಿದು. ಪರ್ಸೋನ ಎಲ್ಲಾ ಛಾಯೆಗಳು ಇಲ್ಲಿವೆ. ಕ್ಲಿಷ್ಟಕರ ಚಿತ್ರ.

ನನ್ನಿಷ್ಟದ ಚಿತ್ರ.

Faith Trilogy: Winter Light (1962)

ಧರ್ಮದ ಮೇಲಿನ ನಂಬಿಕೆ ಇಲ್ಲದೆ ಆಧ್ಯಾತ್ಮಿಕ ಬಿಕ್ಕಟ್ಟಿನಲ್ಲಿ ಬಳಲುತ್ತಿರುವ ಒಂದು ಪಾದ್ರಿ, ಕ್ಷೀಣಿಸುತ್ತಿರುವ ಭಾನುವಾರ ಪ್ರಾರ್ಥನೆಯ ಸೇವೆ ಸಲ್ಲಿಸುತ್ತಿರುತ್ತಾನೆ.

ಪಾದ್ರಿಯ ಅಧಿಕಾರ ವ್ಯಾಪ್ತಿ ಪ್ರದೇಶದಲ್ಲೊಬ್ಬ ನಿವಾಸಿ ಬೆಸ್ತ. ಚೀನಾ ಪರಮಾಣು ಬಾ೦ಬು ತಯಾರಿಸುವ ಭೀಭತ್ಸ ಸುದ್ದಿ ಕೇಳಿ ಅದರ ಆಗು-ಹೋಗುಗಳ ಬಗ್ಗೆ ಭಯಪಟ್ಟು ಕ೦ಗಾಲಾಗಿ ಅಸಹಾಯಕನಾಗಿ, ನೈತಿಕ ಸಹಾಯ ಕೇಳಲು ಬರುತ್ತಾನೆ.

ಆದರೆ ಪಾದ್ರಿ ತನ್ನದೇ ಆದ ಅನಿಶ್ಚಿತತೆ, ಅರ್ಥದ ತೆಕ್ಕೆಗೆ ಬರದ, ಕೊಡಲಾಗದ ಕಾರಣಗಳಿಲ್ಲದ ಅಸ್ತಿತ್ವ ಮತ್ತು ದು:ಖ ದುಮ್ಮಾನಗಳ ಜೀವನದ ಬಗ್ಗೆ ಮಾತಾನಾಡಿ ಇನ್ನಷ್ಟು ಕ೦ಗೆಡಿಸುವ೦ತೆ ಮಾಡುತ್ತದೆ.

ತಣ್ಣನೆಯ, ಜೋಮು ಹಿಡಿದ ಚಳಿಗಾಲ ಇನ್ನೊ೦ದು ಕ್ಯಾರೆಕ್ಟರ್ ನ೦ತ ದೃಶ್ಯವನ್ನು ಆವರಿಸುತ್ತದೆ. ಜನರ ಬಗೆಗಿನ ದೇವರ ತಾತ್ಸರ, ಅನುಕ೦ಪದ ಕೊರತೆ ಚಳಿಗಾಲದ ಇನ್ನೊ೦ದು ಗೂಡಾರ್ಥ.

ವೈಯಕ್ತಿಕ ಮೌಲ್ಯಮಾಪನಕ್ಕಾಗಿ ಹಪಹಪಿಸುವ ಮಾನವ ಪ್ರಪಂಚದಲ್ಲಿನ ಅಸ್ಥಿರ, ದಿಕ್ಕೆಟ್ಟ, ದೈವೀ ನ೦ಬಿಕೆ ಅಸ್ತಿತ್ವವನ್ನು ಪ್ರಶ್ನಿಸುವ ಚಿತ್ರ. ಕ್ಲೋಸ್ ಅಪ್ ಶಾಟ್ ಗಳು ಅದ್ಭುತ.

ಬರ್ಗಮಾನ್ ನ ಫೇವರಿಟ್ ಚಿತ್ರ .

Faith Trilogy:Through a Glass Darkly (1961)

ಥ್ರೂ ಎ ಗ್ಲಾಸ್ ಡಾರ್ಕ್ಲಿ. ಗಾಜಿನ ಮುಖಾ೦ತರ ಕಾಣಸಿಗುವುದು ಎಲ್ಲವೂ ಅಸ್ಪಷ್ಟ.

ದೂರದೊ೦ದು ದ್ವೀಪ. ತೀರದಲ್ಲೊ೦ದು ಒ೦ಟಿ ಮನೆ. ನಾಲ್ಕು ಮನೆಮ೦ದಿ.

ಸ್ಕಿಜೋಫ್ರೀನಿಯದಿ೦ದ ಬಳಲುತ್ತಿರುವ ಕರೀನ್, ಅವಳನ್ನು ಬೇಷರತ್ತಾಗಿ ಪ್ರೀತಿಸುವ ಗ೦ಡ, ಮಗಳ ಖಾಯಿಲೆಯನ್ನೇ ಬಳಸಿ ಕಾದ೦ಬರಿ ಬರೆಯುತ್ತಿರುವ, ಹೊಸತನಕ್ಕಾಗಿ ಹಲುಬುತ್ತಿರುವ ತ೦ದೆ, ಈಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಕರೀನ್ ತಮ್ಮ.

ಒ೦ದು ದಿನ-ರಾತ್ರಿ  ಕಾಲಘಟ್ಟದಲ್ಲಿ ನಡೆಯುವ ಘಟನೆಗಳು ಸಿನೆಮಾದ ವಸ್ತು. ಕೇವಲ ನಾಲ್ಕೇ ಪಾತ್ರಗಳಿರುವ ಚೇ೦ಬರ್ ಸಿನೆಮಾ.

ದೇವರ ಅಸ್ತಿತ್ವದ ಅಸ್ಪಷ್ಟತೆ, ಪಾರಮರ್ಥಿಕ ನ೦ಬಿಕೆ, ಆಧ್ಯಾತ್ಮದಲ್ಲಿನ ನ೦ಬಿಕೆಯನ್ನು ಪ್ರಶ್ನಿಸಿದ ಸಿನೆಮಾ.

ಅಧ್ಬುತ ಸಿನೆಮಾಟೋಗ್ರಾಫಿ. ಇಂಗ್‌ಮರ್ ಬರ್ಗ್‌ಮನ್ ಮಾತ್ರ ಇ೦ತಹ ಚಿತ್ರಗಳನ್ನು ಮಾಡಲು ಸಾಧ್ಯ. ಬೆರ್ಗ್ಮಾನ್ ನ ಪಾರಮಾರ್ಥಿಕ ಬಿಕ್ಕಟ್ಟು ಆತ್ಮಕಥೆ ಚಿತ್ರದ೦ತೆ ಹರಿದಿದೆ.

ದೇವರ ಅಸ್ತಿತ್ವದ ಬಗೆಗಿನ ಉತ್ತರವಿಲ್ಲದ ಪ್ರಶ್ನೆಗಳು, ಅಭದ್ರ ಭಾವನೆಗಳು ಬಹುವಾಗಿ ಕಾಡುತ್ತವೆ.